ಸೀಡ್’ಬಾಲ್ ಮಹಾ ಅಭಿಯಾನ-2017

​”ಅಬ್ಬಬ್ಬಾ ಎಂಥಾ ಉರಿ ಬಿಸಿಲು,ಹೊರಗೆ ಕಾಲಿಡಕ್ಕಾಗಲ್ಲ,ಮನೆ ಒಳಗೆ ಕೂತರು ಬೆವರೋದ್ ನಿಲ್ಲಲ್ಲಾ,ರಾತ್ರೀನೋ ಈ ಸೆಕೆಗೆ ನಿದ್ದೇನೆ ಬರಲ್ಲಾ,ಮಹಡಿ ಮೇಲೆ ಹೋಗಿ ನಿಂತರೂ ಒಂದ್ ತಣ್ಣಗಿರೋ ಗಾಳಿ ಬೀಸಲ್ಲ.”

ಕಳೆದ ಕೆಲ ವರ್ಷಗಳಿಂದ ಬೇಸಿಗೆ  ಆರಂಭವಾದೊಡನೆ ಎಲ್ಲರ ಬಾಯಲ್ಲೂ ಕೇಳಿ ಬರುವ ಮಾತುಗಳಿವು. ಅಭಿವೃದ್ಧಿಯ ಹೆಸರಿನಲ್ಲಿ ಇರೋ ಬರೋ ಮರಗಳನ್ನೆಲ್ಲ ಕಡಿದು, ಕಿಟಿಕಿ,ಬಾಗಿಲು,ಮಂಚಗಳೆನ್ನುತ್ತಾ ತನ್ನ ಸುಖಕ್ಕೆ ಅಗತ್ಯವಾದ ವಸ್ತುಗಳನ್ನೆಲ್ಲಾ ತಯಾರಿಸಿದ ಮನುಜ,ಗಾಳಿ ಬೀಸುತ್ತಿಲ್ಲವೆಂದು  ಕಿಟಕಿ,ಬಾಗಿಲುಗಳನ್ನು ತೆರೆದಿಟ್ಟು ಮಲಗುವ ಪರಿಸ್ಥಿತಿಗೆ ಬಂದಿರುವುದು ಒಂಥರಾ ವಿಪರ್ಯಾಸವೇ ಸರಿ.

ಹೋಗಲಿ ಫ್ಯಾನ್ ಗಾಳಿ ಬೀಸುತ್ತೆನ್ನಲೂ ಕರೆಂಟಾದ್ರು ಇರುತ್ತಾ?? ಅದ್ಹೇಗ್ ಇರುತ್ತೆ,ಅದನ್ನ ತಯಾರಿಸಲು, ಆಣೆಕಟ್ಟುಗಳಲ್ಲಿ ನೀರಿರಬೇಕು, ಜಲಪಾತಗಳು ತುಂಬಿಹರಿಯಬೇಕು, ಇದೆರಡು ಆಗಬೇಕೆಂದರೆ ಮಳೆ ಬರಬೇಕು,ಮೋಡಗಳನ್ನು ತಡೆಹಿಡಿದು ಮಳೆ ಸುರಿಸುತ್ತಿದ್ದ ಮರಗಳನ್ನು ತಿಂದು ತೇಗಿದ ಮೇಲೆ ಮಳೆ ಬರುವುದಾದರೂ ಹೇಗೆ??

ಬೆಳೆದ ಮರಗಳನ್ನಂತು ಬಿಡಲಿಲ್ಲ, ತಾವು ತಿನ್ನುವ ಹಣ್ಣುಗಳಿಂದ ಹೊಟ್ಟೆ ಸೇರುತ್ತಿದ್ದ ಬೀಜಗಳನ್ನು, ಮಲದೊಂದಿಗೆ ಹೊರಹಾಕಿ, ಕಾಡು,ಬೆಟ್ಟ ಗುಡ್ಡಗಳಲ್ಲಿ ಮರ ಬೆಳೆಯಲು ಸಹಕರಿಸುತ್ತಿದ್ದ ಹಕ್ಕಿಗಳನ್ನೂ, ತನ್ನ 2g4g ಗಳ ಮೇಲಿನ ಮೋಹದಿಂದಾಗಿ ಕೊಂದುಹಾಕಿದ. ಇಷ್ಟು ಸಾಲದೆಂಬಂತೆ ಸರ್ಕಾರದ ಅಕ್ರಮ-ಸಕ್ರಮ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಸಿಕ್ಕಿದಷ್ಟು ಜಾಗವನ್ನು ಬಾಚಿಕೊಳ್ಳುವ ದುರಾಲೋಚನೆಯಿಂದಾಗಿ,ಕಾಡ್ಗಿಚ್ಚಿನ ಹೆಸರಿನಲ್ಲಿ ಅವ ದಹಿಸಿದ ಮರಗಳಿಗಂತೂ ಲೆಕ್ಕವೇ ಇಲ್ಲ ಬಿಡಿ.

ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪರಿಸರದ ಸಮತೋಲನವನ್ನೆ ಹಾಳು ಗೆಡವಿದ ಮನುಜ ತಾನು ಕತ್ತರಿಸಿದ ಮರದ ಹತ್ತನೇ ಒಂದರಷ್ಟಾದರೂ ಗಿಡಗಳನ್ನು ನೆಡುತ್ತಾ ಬಂದಿದ್ದರೆ ನಾವಿಂದು ಚಿಂತಿಸಬೇಕಾದ ಪ್ರಸಂಗವೇ ಬರುತ್ತಿರಲಿಲ್ಲ.ಇನ್ನ ಘನವೆತ್ತ ರಾಜ್ಯ ಸರ್ಕಾರ ಕಳೆದ ವರ್ಷ ಕೋಟಿ ವೃಕ್ಷ  ಯೋಜನೆಯನ್ನು ಘೋಷಿಸಿತಾದರೂ ಅದಿನ್ನೂ ಕಾರ್ಯರೂಪಕ್ಕೆ ಬರದೆ ಘೋಷಣೆಯಾಗೆ ಉಳಿದಿರುವುದು ದುಃಖದ ವಿಷಯ.

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ।     ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ?ಬಿದ್ದ ಮನೆಯನು ಕಟ್ಟೊ – ಮಂಕುತಿಮ್ಮ ॥

 ಕೊಳೆಯಾದ ಇಳೆಯನ್ನು ಮಳೆಯಿಂದ ಮತ್ತೆ ಮತ್ತೆ ತೊಳೆಯುವ ಆ ಆಕಾಶದಂತೆ, ಬೆಳೆಯನ್ನು ಕೊಯ್ದ ನಂತರವೂ ಮತ್ತೆ ಮತ್ತೆ ಬೆಳೆ ಬೆಳೆಯುವ ಈ ಧರೆಯಂತೆ, ಕೆಳಗೆ ಬಿದ್ದಿರುವುದನ್ನು ಎತ್ತಿ ನಿಲ್ಲಿಸುವುದೇ ಮಾನವನ ನಿರಂತರ ಕ್ಷಮತೆಯೆನ್ನುವ ಡಿ.ವಿ..ಜಿ ಯವರು ಆಶಯದಂತೆ, ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದಂತಹ ಪರಿಸರ ಸಂರಕ್ಷಣೆ ಹಲವು ಸಂಘ,ಸಂಸ್ಥೆಗಳ ಕಾಳಜಿಯಿಂದಾಗಿ ಹೊಸರೂಪ ಪಡೆದಿದೆ.

2014 ರ ಲೋಕಸಭಾ ಚುನಾವಣೆಯ ನಂತರವಂತೂ ದೇಶದ ಯುವಪಡೆಯಲ್ಲಿ ಅದೇನೋ ಹೊಸ ಉತ್ಸಾಹ, ದೇಶ,ಧರ್ಮ,ಪರಿಸರಕ್ಕಾಗಿ ತಮ್ಮ ಕೈಲಾದ ಸೇವೆ ಮಾಡಬೇಕೆಂಬ ತುಡಿತ.ಇದೇ ತುಡಿತದ ಜೊತೆ “ಗಿಡ ಮರಗಳನ್ನು ಬೆಳೆಸಲು ಏನಾದರು ವಿನೂತನ ವಾದದ್ದನ್ನು ಮಾಡಬೇಕೆಂಬ” ಚಿಂತನೆ ಹಾಗೂ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಗಂಗಾಧರ್ ಜಿ ಅವರ ಮಾರ್ಗದರ್ಶನ  ನಮೋ ಬ್ರಿಗೇಡ್ ನಿಂದ ಜೊತೆಯಾದ ಸಮಾನ ಮನಸ್ಕರ ಉತ್ತಿಷ್ಠ ಭಾರತ ತಂಡವನ್ನು ಗಿಡನೆಡುವ ಸಾಂಪ್ರದಾಯಿಕ ಪದ್ಧತಿಯಿಂದ, ಸೀಡ್’ಬಾಲ್(ಬೀಜದುಂಡೆ) ಅಭಿಯಾನದೆಡೆಗೆ ಮುಖ ಮಾಡುವಂತೆ ಮಾಡಿತು.

ಸೀಡ್’ಬಾಲ್ ಎಂದರೆ  ಕಡಿಮೆ ಶ್ರಮವಹಿಸಿ, ಅತೀ ಕಡಿಮೆ ವೆಚ್ಚದಲ್ಲಿ,ಹೆಚ್ಚೆಚ್ಚು ಗಿಡ-ಮರ ಬೆಳೆಸಬಹುದಾದಂತಹ ಒಂದು ಸರಳ ವಿಧಾನ,ಇಲ್ಲಿ ಸಸಿಗಳಿಗೆ ಹಣವಾಗಲಿ, ಅದ ನೆಡಲು ಗುಂಡಿತೆಗೆಯುವ ಶ್ರಮವಾಗಲಿ ಇಲ್ಲ, ಸೀಡ್’ಬಾಲ್ ತಯಾರಿಸಲು ಬೇಕಾಗಿರುವುದು ಕೆಮ್ಮಣ್ಣು,ಗೋಮಯ(ಸಗಣಿ), ಗೋಮೂತ್ರ(ಕಡ್ಡಾಯವೇನಿಲ್ಲ) ಹಾಗೂ ಬೇರೆ ಬೇರೆ ಮರದ ಬೀಜಗಳು ಅಷ್ಟೆ.

ಕೆಮ್ಮಣ್ಣು ಹಾಗು ಗೋಮಯವನ್ನು ನೀರು ಅಥವಾ ಗೋಮೂತ್ರ ಹಾಕಿ ಕಲಸಿ,ಚಪಾತಿಯ ಉಂಡೆ ಗಾತ್ರದಷ್ಟು ದೊಡ್ಡದಾದ ಉಂಡೆಗಳನ್ನು ಮಾಡಿ ಅದರ ಮಧ್ಯಭಾಗದಲ್ಲಿ ಯಾವುದಾದರು (ಹೊಂಗೆ,ಹುಣಸೆ,ಕಹಿಬೇವು,ಅಂಟವಾಳ, ತಾರೆಕಾಯಿ,ಇತ್ಯಾದಿ) ಮರದ ಬೀಜಗಳನ್ನಿಟ್ಟರೆ ಸೀಡ್’ಬಾಲ್ ಸಿದ್ಧ, ಒಂದೆರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟರೆ ಮುಕ್ಕಾಲುಭಾಗ ಕೆಲಸ ಆದಂತೆ.ನಂತರ ಮಳೆಗಾಲ ಆರಂಭವಾಗಿ ಒಂದೆರಡು ಮಳೆ ಬಿದ್ದ ಮೇಲೆ, ಸಂಗ್ರಹಿಸಿಟ್ಟಿರುವ ಸೀಡ್’ಬಾಲ್ ಗಳನ್ನು ಬೆಟ್ಟ,ಗುಡ್ಡ,ಕೆರೆಗಳ ಸುತ್ತ-ಮುತ್ತ,ಗೋಮಾಳ,ಹೀಗೆ ಖಾಲಿ ಇರುವ ಯಾವುದೇ ಸ್ಥಳ/ಜಾಗದಲ್ಲಿ ಅಥವಾ ರಸ್ತೆಯ ಬದಿಗಳಲ್ಲಿ ಸುಮ್ಮನೇ ಎಸೆದು ಬಂದರಾಯಿತು,ಮಳೆಯ ನೀರು ಈ ಸೀಡ್’ಬಾಲ್ ಗಳ ಮೇಲೆ ಬಿದ್ದು ಒಳಹೊಕ್ಕ ನಂತರ ಒಳಗಿರುವ ಬೀಜವು ಮೊಳಕೆಯೊಡೆಯಲು ಶುರುವಾಗಿ ಗಿಡವಾಗುತ್ತದೆ.
ಎರಡನೇ ಮಹಾಯುದ್ಧದ ಕಾಲದಲ್ಲಿ ಜಪಾನ್ ದೇಶ ಆಹಾರ ಉತ್ಪನ್ನಗಳ ಕೊರತೆ ಉಂಟಾಗಬಹುದೆಂಬ ಭಯದಲ್ಲಿ, ಸೀಡ್’ಬಾಲ್ ವಿಧಾನವನ್ನೆ ಬಳಸಿ, ಆಹಾರ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸಿತ್ತಂತೆ, ಅಲ್ಲದೇ ಇಂದಿಗೂ ಅದೇ ವಿಧಾನವನ್ನು ಬಳಸಿ ಭತ್ತ ಬೆಳೆಯುತ್ತಾರಂತೆ.ಥೈಲ್ಯಾಂಡ್ ದೇಶ ಪ್ರತಿ ವರ್ಷ ಲಕ್ಷಾಂತರ ಸೀಡ್’ಬಾಲ್ ಗಳನ್ನು ತಯಾರಿಸಿ, ವಿಮಾನದ ಮೂಲಕ ಕಾಡುಗಳಲ್ಲಿ ಎಸೆಯುತ್ತದಂತೆ,

ಎಂಟತ್ತು ಕೋಟಿ ಜನಸಂಖ್ಯೆ ಇರುವ ಈ ದೇಶದವರೇ ಇಷ್ಟೊಂದು ಮಾಡುತ್ತಿರಬೇಕಾದರೆ, ಇನ್ನೂ 125 ಕೋಟಿ ಇರುವ ನಾವೇನು ಕಮ್ಮಿ,ನಾವೂ ಒಮ್ಮೆ ಪ್ರಯತ್ನಿಸಿ ನೋಡೋಣ ವೆನ್ನುತ್ತಾ, ಮೂರುವರ್ಷಗಳ ಹಿಂದೆ ಸುಮಾರು 80,000 ಸೀಡ್’ಬಾಲ್ ಗಳನ್ನು ತಯಾರಿಸಿ ತುಮಕೂರಿನ ಮಧುಗಿರಿ ಬೆಟ್ಟದಲ್ಲಿ ಹಾಕಿ, ಪರೀಕ್ಷಿಸಿ,ಬಂದ 60-70 ಪ್ರತಿಶತ ಫಲಿತಾಂಶದಿಂದಾಗಿ ಸಂತಸಗೊಂಡ ಉತ್ತಿಷ್ಠ ಭಾರತ ತಂಡ, ಕಳೆದ ವರ್ಷ ಸರಿ ಸುಮಾರು ಮೂರೂವರೆ ಲಕ್ಷ ಸೀಡ್’ಬಾಲ್ ಗಳನ್ನು ತಯಾರಿಸಿ ಕನಕಪುರ,ತಾತಗುಣಿ,ಅಗರ ರಸ್ತೆಯ ಬದಿಗಳಲ್ಲಿ ಹಾಗೂ ಅಗರ ಕೆರೆಯ ಸುತ್ತಾಮುತ್ತಾ ಬಿತ್ತನೆ ಮಾಡುವ ಮೂಲಕ ಹಲವಾರು ವರ್ಷಗಲ ಕಾಲ ಮಾನವನ ಸ್ವಾರ್ಥಕ್ಕೆ ಬಲಿಯಾಗಿದ್ದ ಪರಿಸರದ ಪುನಶ್ಚೇತನಕ್ಕಾಗಿ ಅಳಿಲು ಸೇವೆ ಮಾಡುತ್ತಿದೆ.

ಈ ಭಾರಿ ರಾಜ್ಯಾದ್ಯಂತ ಸೀಡ್’ಬಾಲ್ ಮಹಾ ಅಭಿಯಾನ ನಡೆಸಿ ಮೂರುಕೋಟಿ ಸೀಡ್’ಬಾಲ್ ಗಳನ್ನು ತಯಾರಿಸ ಬೇಕೆಂಬ ಗುರಿ ಹೊಂದಿರುವ ತಂಡ ಈಗಾಗಲೇ ಶಿವಮೊಗ್ಗ, ಚಿತ್ರದುರ್ಗಗಳಲ್ಲಿ ಒಂದು ಲಕ್ಷ ಸೀಡ್’ಬಾಲ್ ಗಳನ್ನು ಮಾಡಿ ಮುಗಿಸಿದೆ.

ಹೆಚ್ವಿನ ಮಾಹಿತಿಗಾಗಿ ಅಥವಾ, ನಿಮ್ಮ ಊರುಗಳಲ್ಲಿ ಸೀಡ್’ಬಾಲ್ ತಯಾರಿಕ ಕಾರ್ಯಕ್ರಮವನ್ನು ಆಯೋಜಿಸಲು ಸಂಪರ್ಕಿಸಿ,

 ಶ್ರೀನಿವಾಸ ಹಂಪನ -99645 78840 ಧನುಷ್ ಮೂರ್ತಿ – 9900897694       

                     -ಉತ್ತಿಷ್ಠ_ಭಾರತ